ಮಾನವೀಯತೆ ಮೆರೆಯಲಿ…
ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತ ನೋಡಿದಾಗ, ನಮಗೆ ಕಾಣುವ ಹಾಗೂ ಕಾಡುವ ಪ್ರಶ್ನೆ, ಎಲ್ಲಿದೆ ಮಾನವೀಯತೆ? ಎಲ್ಲೆಡೆ ನಮಗೆ ಎದುರಾಗೋದು ಹಿಂಸಾಚಾರ, ಗಲಾಟೆ, ಯುದ್ಧದ ಕಾರ್ಮೋಡ, ಭಯೋತ್ಪಾದನೆ ಎಂಬ ಭಯದ ಕೂಪ. ಪ್ರೀತಿ, ವಾತ್ಸಲ್ಯ ಮರೆಯಾಗಿ ಭೀತಿ ಮನೆಮಾಡಿದೆ. ಇಂಥಹ ಪರಿಸ್ಥಿತಿಯಲ್ಲಿ ನಾವೆಲ್ಲಾ ಮನುಜರಾಗಿ ಯೋಚಿಸಬೇಕಿದೆ.
ಬುದ್ಧ ಹುಟ್ಟಿದ ನಾಡು, ಶಾಂತಿಯ ನೆಲೆಬೀಡು, ನಮ್ಮ ಹೆಮ್ಮೆಯ ಹಿಂದುಸ್ಥಾನ. ಆದರೆ ಇಲ್ಲಿ ನಡೆಯುತ್ತಿರುವುದೆಂತಹ ಮಾರಣಹೋಮ. ಕಣ್ಮುಚ್ಚಿ ಬಿಡುವುದರೊಳಗೆ ನಡೆದೇ ಹೋಯಿತು ಅಮಾಯಕ ಜೀವಗಳ ಬಲಿ. ಆದರೆ ಯಾವ ಕಾರಣಕ್ಕೆ ಈ ಪೈಶಾಚಿಕ ಘಟನೆ. ಮಾನವೀಯತೆ ಇಲ್ಲದ ಭಯಾನಕ ಕೃತ್ಯ. ಇದೆಲ್ಲವನ್ನು ನೋಡಿದಾಗ ಕಾಡುವ ವೇದನೆ ಒಂದೇ ಅದು ಎಲ್ಲಿದೆ ಮಾನವೀಯತೆ???
ದಯವಿರದ ಧರ್ಮ ಆದಾವುದಯ್ಯಾ? ದಯವೇ ಧರ್ಮದ ಮೂಲವಯ್ಯಾ ಅನ್ನುವ ಬಸವಣ್ಣನವರ ವಚನದ ಸಾರ ಎಲ್ಲರಿಗೂ ಸಾರಿ ಹೇಳುವ ಅವಶ್ಯಕತೆ ಇಂದು ನಮ್ಮ ನಿಮ್ಮೆಲ್ಲರ ಮುಂದಿದೆ. ಧರ್ಮ, ಜಾತಿ, ಕುಲ ಇವೆಲ್ಲಕ್ಕಿಂತ ದೊಡ್ಡದು ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ. ಎತ್ತ ಸಾಗುತ್ತಿದೆ ಈ ಸಮಾಜ, ಎಲ್ಲಿಗೆ ಬಂದು ನಿಂತಿದೆ ಧರ್ಮದ ಹೆಸರಿನ ಯುದ್ಧ, ಎಲ್ಲಿಗೆ ತಲುಪಲಿದೆ ಈ ಮರಣ ಮೃದಂಗ?
ಪ್ರಪಂಚದ ಯಾವ ಧರ್ಮ ಅಮಾಯಕರ ಬಲಿಯನ್ನು ಬೋದಿಸುತ್ತದೆ? ಯಾವ ಧರ್ಮ ತನ್ನ ಹೆಸರಿನಲ್ಲಿ ಮನುಷ್ಯರ ಆಹುತಿ ಬಯಸುತ್ತದೆ? ದಾರಿ ತಪ್ಪಿದವರಿಗೆ ಧರ್ಮದ ದಾರಿಯಲ್ಲಿ ನಡೆ ಅನ್ನುವ ವಾಡಿಕೆ ನಮ್ಮಲ್ಲಿದೆ. ಧರ್ಮದ ಹಾದಿ ಅಂದರೆ ಶಾಂತಿಯಿಂದ, ಸನ್ನಡತೆಯ ಮಾರ್ಗದಲ್ಲಿ ಮುನ್ನಡೆಯುವುದು. ಆದರೆ ಇವತ್ತಿನ ಜಗತ್ತು ಸಾಕ್ಷಿ ಆಗಿರೋದು ಧರ್ಮದ ಹಾದಿ ಅಲ್ಲ, ಕರ್ಮದ ಹಾದಿಯೂ ಅಲ್ಲ. ಬದಲಾಗಿ ದ್ವೇಷವೆಂಬ ಹಗೆ, ಭಯೋತ್ಪಾದನೆಯೆಂಬ ಭಯಾನಕತೆ.
ಸಮಾಜದಲ್ಲಿನ ಮನಸುಗಳು ಬದಲಾಗಬೇಕು. ಆಮಿಷಗಳಿಗೆ ಕೊರಳೊಡ್ಡದೇ, ಧರ್ಮಾತೀತವಾಗಿ ಮಾನವತಾವಾದವನ್ನು ಎತ್ತಿ ಹಿಡಿಯಬೇಕು, ಉಳಿಸಬೇಕು. ಯಾರದೋ ಕರೆಗೆ, ಎಂಥದ್ದೋ ಕಲ್ಮಶ ಮನಸ್ಸುಗಳಿಗೆ ಯುವಜನತೆ ಮರುಳಾಗದಿರಲಿ. ಮಾನವೀಯತೆ ಎಲ್ಲೆಲ್ಲೂ ರಾರಾಜಿಸಲಿ, ಮಾನವೀಯತೆಯ ಮೆರೆಯಲಿ..
– ಸ್ವಾತಿ ಎಂ ಶರ್ಮ, ಐಐಐಟಿ-ಬಿ