ಯೋಗದಿಂದ ಆರೋಗ್ಯ…
ಆರೋಗ್ಯವೇ ಭಾಗ್ಯ…ಈ ಮಾತನ್ನು ನಾವೆಲ್ಲರೂ ಕೇಳಿರ್ತೀವಿ. ಆದರೆ ಎಷ್ಟು ಗಂಭೀರವಾಗಿ ಅದನ್ನ ಪಾಲಿಸುತ್ತೇವೆ ಅನ್ನೋದು ಮಾತ್ರ ಯೋಚಿಸಬೇಕಾದ ವಿಷಯ. ಇವತ್ತಿನ ದಿನಮಾನದಲ್ಲಿ ಆರೋಗ್ಯ ಅನ್ನುವುದು ಯಾವ ಸಂಪತ್ತಿಗೂ ಕಡಿಮೆಯಿಲ್ಲ. ಅದೊಂದಿದ್ರೆ ಅದೆಷ್ಟೋ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವ ಸಾಮರ್ಥ್ಯ ಬರುತ್ತದೆ.
ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತು ಕೂಡ ಇದೆ. ಆದರೆ ಆರೋಗ್ಯಕರ ಊಟದ ಜೊತೆಗೆ, ರುಚಿಗೆ ಉಪ್ಪಿನಕಾಯಿಯ ಹಾಗೆ ವ್ಯಾಯಾಮವೂ ಜೊತೆಯಾದರೆ ಇನ್ನಷ್ಟು ಬಲ ಸಿಗುತ್ತದೆ. ನಮ್ಮ ಜೀವನದಲ್ಲಿ ವ್ಯಾಯಾಮ ಅನ್ನುವುದು ಮಹತ್ವದ ಪಾತ್ರ ವಹಿಸಿದೆ. ಬಹಳಷ್ಟು ಯುವ ಜನತೆ ಇದನ್ನರಿತು ಜಿಮ್, ರನ್ನಿಂಗ್, ಯೋಗ ಹೀಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ತಿರೋದು ಸಂತಸದ ಸಂಗತಿ.
ಯೋಗ ಅಂದಾಕ್ಷಣ ನೆನಪಿಗೆ ಬರೋದು ಮನಸ್ಸು ಹಾಗೂ ದೇಹದ ಆರೋಗ್ಯ. ದಿನನಿತ್ಯ ನಮಗಾಗಿ ಒಂದಷ್ಟು ಸಮಯ ಕೊಟ್ಟು ಯೋಗ ಅಥವಾ ನಿಮಗಿಷ್ಟದ ವ್ಯಾಯಾಮ ಮಾಡಿದರೆ ಅದೆಷ್ಟೋ ನೋವುಗಳಿಗೆ ಸುಲಭ ಪರಿಹಾರ ಸಿಕ್ಕೀತು. ಜೂನ್ ತಿಂಗಳ ೨೧ನೇ ತಾರೀಖು ನಾವು ವಿಶ್ವ ಯೋಗ ದಿನ ಅಂತ ಆಚರಿಸುತ್ತೇವೆ. ಈ ದಿನವನ್ನು ಐಐಐಟಿ-ಬೆಂಗಳೂರಿನಲ್ಲೂ ಆಚರಿಸಲಾಯಿತು. ವಿದ್ಯಾರ್ಥಿಗಳು, ಬೋಧಕ ವೃಂದ, ಸಿಬ್ಬಂಧಿ ವರ್ಗದವರು ಯೋಗಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದು ಒಂದು ದಿನದ ಆಚರಣೆಯಲ್ಲ. ಇದು ದಿನಚರಿಯ ಒಂದು ಭಾಗವಾಗಬೇಕು ಅನ್ನುವುದನ್ನು ಸಾರಿದ ಈ ಒಂದು ಗಂಟೆಯ ಯೋಗಾಭ್ಯಾಸ ಬಹಳಷ್ಟು ಜನರಲ್ಲಿ ಹುರುಪು ತಂದಿತ್ತು.
ಭಾರತೀಯ ಸಂಪ್ರದಾಯದ ಒಂದು ಭಾಗವೇ ಆಗಿದ್ದ ಯೋಗವನ್ನು ೨೦೧೪ ರಲ್ಲಿ ವಿಧ್ಯುಕ್ತವಾಗಿ ವಿಶ್ವ ಯೋಗ ದಿನಾಚರಣೆಯಾಗಿ ಘೋಷಿಸಲಾಯ್ತು. ಅಲ್ಲಿಂದ ಇಲ್ಲಿಯವರೆಗೆ ಈ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.
ಯೋಗದಿಂದ ಪ್ರಯೋಜನ ಏನು ಅಂತ ತುಂಬಾ ಜನ ಕೇಳ್ಬೋದು. ಅದು ಸಹಜ ಆದರೆ ಯೋಗಾಭ್ಯಾಸ ಮಾಡಿದವರಿಗೆ ಅದರ ಲಾಭ ಗೊತ್ತಿರುತ್ತದೆ. ಬಹಳಷ್ಟು ದೇಹದ ನೋವಿಗೆ ಇದು ರಾಮಬಾಣ, ಅಷ್ಟೇ ಅಲ್ಲ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿಯನ್ನು ಕೊಡುತ್ತದೆ. ಹಲವಾರು ಸಮಸ್ಯೆಗಳಿಗೆ ಯೋಗದಲ್ಲಿ ಭಿನ್ನ ವಿಭಿನ್ನ ಆಸನಗಳಿವೆ. ಅದನ್ನ ಶ್ರದ್ಧೆಯಿಂದ ಮಾಡಿದರೆ ನಿಜಕ್ಕೂ ಯೋಗದಿಂದ ಆರೋಗ್ಯ ಯೋಗ ಒಲಿಯುತ್ತದೆ. ಯೋಗ ಹೇಗೆ ಹುಟ್ಟಿತು, ಅದನ್ನು ಯಾಕೆ ಮಾಡಬೇಕು, ಯಾವಾಗ ಮಾಡಬೇಕು, ಏನಕ್ಕಾಗಿ ಮಾಡಬೇಕು ಹೀಗೆಲ್ಲಾ ಯೊಚನೆ, ಸಾವಿರಾರು ಪ್ರಶ್ನೆ ಬಿಟ್ಟು ಒಮ್ಮೆ ಯೋಗಕ್ಕೆ ತಲೆಬಾಗಿ, ದೇಹ ಮತ್ತು ಮನಸ್ಸನ್ನು ಬಗ್ಗಿಸಿ ನಿಜಕ್ಕೂ ವಾಸ್ತವ ನಿಮಗೇ ಅಚ್ಚರಿತರಿಸುತ್ತದೆ.
ಅದೆಷ್ಟೇ ಕೆಲಸದೊತ್ತಡ, ನೂರಾರು ಆಲೋಚನೆ ಇದ್ದರೂ ನಮಗಾಗಿ ಒಂದಿಷ್ಟು ಹೊತ್ತು ಮೀಸಲಿಡಬೇಕು. ಆಗ ನಮ್ಮ ಆರೋಗ್ಯ ವೃದ್ಧಿಸುತ್ತದೆ ಮನಸ್ಸಿಗೆ ಶಾಂತಿಯೂ ಸಿಗುತ್ತದೆ. ಮನಸ್ಸು ಆಹ್ಲಾದಕರವಾಗಿದ್ದರೆ ನಾವು ಮಾಡುವ ಪ್ರತಿ ಕಾರ್ಯದಲ್ಲೂ ಹೊಸ ಹುರುಪು ಮೂಡುತ್ತದೆ, ಒಳ್ಳೆಯ ಯೋಚನೆ ಹಾಗೂ ಕ್ರಿಯಾಶೀಲ ಆಲೋಚನೆಗೆ ನಾವು ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ. ಯೋಗ ಅಥವಾ ಇನ್ಯಾವುದೋ ವ್ಯಾಯಾಮದಲ್ಲಿ ಅಗಾಧ ಲಾಭ ಇದೆ ಅಂದರೆ ನಾವ್ಯಾಕೆ ಪಾಲಿಸಬಾರದು ಅಲ್ವಾ? ಮತ್ತಿನ್ನೇಕೆ ತಡ ಮುಂದಿನ ಯೋಗ ದಿನದವೆರೆಗೆ ಕಾಯದೇ ಇಂದಿನಿAದ ದೇಹಕ್ಕೆ ಹಾಗೂ
ಬುದ್ಧಿಗೆ ಸ್ವಲ್ಪ ಕಸರತ್ತಿನ ಜೊತೆ ಆರೋಗ್ಯದ ಕಡೆಗೆ ಕರೆದೊಯ್ಯೋಣ.
Swathi M. Sharma
Senior Producer-Digital Media and Branding
IIIT-Bangalore